ಕಾರಳ್ಳು

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ

ಚರ್ಮ, ಅದರ ಬಳಿಯ ಲೋಳೆಪೊರೆಗಳಲ್ಲಿ (ಮ್ಯುಕೋಸ) ಏಳುವ ಕೆಡುಕು ಮಾಡದ ಬೆಳೆತಗಳಿಗೆ ಇರುವ ಹೆಸರು (ವಾರ್ಟ್). ಪುಲ್ಲಂಪುರಿ, ಹುಲ್ಲುರಿ, ಹಾಲುಣ್ಣಿ, ಆಲಬು, ಮತ್ತಿ (ಮಚ್ಚೆ) ಎನ್ನುವುದೂ ಉಂಟು. ಆಣಿ, ಕಲ್ಲೊತ್ತು ಹುಟ್ಟುಮಚ್ಚೆಗಳು ಕಾರಳ್ಳುಗಳಲ್ಲ. ಕಾರಳ್ಳಿನ ಮೇಲ್ತಳ ಸೊಟ್ಟಾಪಟ್ಟವಾಗಿ, ಒರಟಾಗಿ ಗಡಸಾಗಿರುತ್ತದೆ. ಎಳೆಮಕ್ಕಳಲ್ಲಿ ಸಾಮಾನ್ಯವಾಗಿ ಬೆರಳು, ಬೆರಳುಸಂದುಗಳು, ಹಿಂಗೈ, ಅಂಗೈ, ಗೆಣ್ಣುಗಳು, ಅಂಗಾಲುಗಳಲ್ಲಿ ಬೇಳೆಕಾಳಿನ ಗಾತ್ರಕ್ಕೆ ಎದ್ದಿರುವುದುಂಟು. ಕೆನ್ನೆ, ನೆತ್ತಿಯ ಅಂಚಿನಲ್ಲಿ ಏಳುವವು ತೀರ ಸಣ್ಣವು. ಅಂಗಾಲಲ್ಲಿ ಎದ್ದವು ನೋವು ಕೊಡಬಹುದು. ಚರ್ಮದ ಆಳದಿಂದ ಇವು ಏಳದ್ದರಿಂದ ಎಲ್ಲ ಕಡೆಗೂ ಆಡುವಂತಿರುತ್ತವೆ. ಕೋಳಿ, ನಾಯಿಗಳಲ್ಲಿ ಕಾರಳ್ಳು ತೀರ ಸಾಮಾನ್ಯವಾದ್ದರಿಂದ ಮಾನವನಿಗೆ ಇವುಗಳಿಂದ ಸೋಂಕಾಗಿ ಬರಬಹುದೆಂದು ಕೆಲವರ ಊಹೆ. ಚರ್ಮದೊಳಕ್ಕೆ ತೂರಿ ನೆಲೆಸಿ 5-6 ತಿಂಗಳ ಕಾಲ ಸುಮ್ಮನಿದ್ದು ಆಮೇಲೆ ಕಾರಳ್ಳಾಗಿ ಹೊರಗಾಣಿಸಿಕೊಳ್ಳುವ, ಸೋಸಬಹುದಾದ ಒಂದು ವಿಷ ಕಣ (ವೈರಸ್) ಇದರ ಮೂಲ ಕಾರಣ. ಇದ್ದಲ್ಲಿರದೆ ಈ ಸೋಂಕು ಹರಡಿಕೊಳ್ಳುವುದರಿಂದ ಎಷ್ಟೋ ಬಾರಿ ಕೆಲವೇ ತಿಂಗಳಲ್ಲಿ ಸುತ್ತಮುತ್ತ ಹತ್ತಾರು ಏಳುತ್ತವೆ. ಸಾಮಾನ್ಯ ಕಾರಳ್ಳು ಅಂಟುರೋಗವಾಗಿ ಬೇರೆಯವರಿಗೂ ಅಂಟುತ್ತದೆ. ಗರಡಿಮನೆ ನೆಲದಿಂದ ಒಬ್ಬರಿಂದೊಬ್ಬರಿಗೆ ಹರಡಬಹುದು. ಇವಕ್ಕೂ ನರಮಂಡಲ, ಮಿದುಳಿಗೂ ತೀರ ನಿಕಟಸಂಬಂಧ ಇರುವಂತೆ ತೋರುತ್ತದೆ. ಕೇವಲ ಸೂಚನೆಯ ಮನೋರೋಗಚಿಕಿತ್ಸೆಯಿಂದ ಇವು ಇಲ್ಲವಾಗುವುದಂತೂ ಸೋಜಿಗವೇ. ಇದರಿಂದಲೇ ಮನೋರೋಗ ಮದ್ದುಗಳಿಂದಲೂ ಮಾಯ ಮಂತ್ರಗಳಿಂದಲೂ ಮಾಯವಾಗುತ್ತವೆ. ಎಷ್ಟೋ ವೇಳೆ ಒಂದೆರಡು ವರ್ಷಗಳಲ್ಲಿ ಅವಷ್ಟಕ್ಕವೇ ಮಾಯವಾಗುವುದುಂಟು. ಮಕ್ಕಳಲ್ಲಿ ಏಳುವವು ಸಣ್ಣವು. ಅವು ಅಗಲವಾಗಿ, ಕೊಂಚ ನುಣುಪಾಗಿ ಇನ್ನೂ ಬೇಗನೆ ಹರಡಿಕೊಳ್ಳುವುವು. ಕೈಕಾಲುಗಳು, ಮೊಗದ ಮೇಲಂತೂ ಮಕ್ಕಳಲ್ಲಿ ನೂರಾರು ಸಣ್ಣವು ಎಲ್ಲೆಲ್ಲೂ ಹರಡಿಕೊಂಡು ಅಂದಗೆಡಿಸುತ್ತವೆ. ಇವು ಸಹ ವೈರಸ್‍ಗಳಿಂದೇಳುವ ಅಂಟುರೋಗಗಳೇ.

ಗಂಡಸರಲ್ಲೂ ಹೆಂಗಸರಲ್ಲೂ ತೇವವಾಡುತ್ತಿರುವ ಜನನಾಂಗಗಳು ಮತ್ತು ಗುದಗಳ ಅಂಚಿನಲ್ಲಿ ಅಗಲವಾಗಿ ಹರಡಿಕೊಳ್ಳುವವು ಮೇಹದ ಕಾರಳ್ಳುಗಳು. ಚೂಪಾಗೆದ್ದವು ಅಕ್ಕಪಕ್ಕಗಳಲ್ಲಿ ದಟ್ಟವಾಗಿರುವುದರಿಂದ ನೋಡಲು ಹೂಕೋಸಿನ ಹಾಗೆ ಕಾಣುತ್ತವೆ. ಇವು ಅಂಟುವುದರಿಂದ ಬರುವುವಾದರೂ ಮೇಹದಿಂದಲೇ ಏಳಬೇಕಿಲ್ಲ. ಸಾಮಾನ್ಯ ಕಾರಳ್ಳುಗಳ ಹಾಗೆ ಇವೂ ವೈರಸ್‍ಗಳಿಂದಲೇ ಏಳುತ್ತವೆ. ಇವುಗಳಿಂದ ಸುಲಭವಾಗಿ ರಕ್ತ ಸುರಿವುದಲ್ಲದೆ ಕೆಟ್ಟ ನಾತ ಬಡಿಯುತ್ತದೆ.

ಮೈಜಿಡ್ಡಿನ (ಸಬೇಸಿಯಸ್) ಕಾರಳ್ಳು ಎದೆ, ಹೊಟ್ಟೆ, ಬೆನ್ನುಗಳ ಮೇಲೇಳುವುವು. ಸಾಮಾನ್ಯವಾಗಿ ಯಾರೂ ಇವನ್ನು ಗಮನಿಸರು. ಅಗಲನೆಯ ದದ್ದುಗಳಂತಿದ್ದು ಮೇಲುಗಡೆ ಜಿಡ್ಡು ಅಂಟಿರುತ್ತದೆ. ಇವು ಬೆಳೆದ ಹಾಗೆಲ್ಲ ಅಚ್ಚ ಕಂದು, ಕಪ್ಪು ಬಣ್ಣಕ್ಕೆ ತಿರುಗುತ್ತವೆ. ಇವುಗಳ ಕಾರಣ ಗೊತ್ತಿಲ್ಲ. ಕೆಲವೇಳೆ ಇವನ್ನು ಕೆರೆದಾಗಲೋ ಇವು ಕೆರಳಿದಾಗಲೋ ಏಡಿಗಂತಿ (ಕ್ಯಾನ್ಸರ್) ಆಗುವ ಸೂಚನೆ ತೋರುವುದರಿಂದ ಇವನ್ನು ಮುಖ್ಯವಾಗಿ ಗಮನಿಸಬೇಕಾಗುತ್ತದೆ.

ಯಾವ ಕಾರಳ್ಳೇ ಆಗಲಿ ಏಡಿಗಂತಿಯಾಗಿ ಬದಲಿಸುವುದ ಖಚಿತವಿಲ್ಲವಾದರೂ ಏಡಿಗಂತಿ ಮುಂಚಿನ ಬದಲಾವಣೆಗಳು ಇವು ಅಲ್ಲವೆಂದು ಗುರುತಿಸಲು ಪರಿಣತ ಪರೀಕ್ಷೆಗಳನ್ನೇ ಮಾಡಬೇಕಾಗಬರುತ್ತದೆ. ಕಲ್ಲೊತ್ತುಗಳನ್ನು ಕರಗಿಸಿ ತೆಗೆವ ಮದ್ದುಗಳು ಕಾರಳ್ಳುಗಳಿಗೂ ಆಗುತ್ತವೆ. ವಯಸ್ಸಾದವರ ಮೂಗು, ಕೆನ್ನೆ, ರೆಪ್ಪೆ, ಹಿಂಗೈಗಳ ಮೇಲೆ ಎದ್ದಿದ್ದವಕ್ಕೆ ಅವುಗಳ ಬಗೆ, ಇರುವ ಜಾಗ, ಗಾತ್ರಗಳಿಗೆ ತಕ್ಕ ಹಾಗೆ ಕಾರಳ್ಳುಗಳ ಚಿಕಿತ್ಸೆಯೂ ಆಗಬೇಕು. ಅದೂ ಇದೂ ಏನೇನೊ ಹಚ್ಚಿ ತಿಕ್ಕಿ ಸುಮ್ಮನೆ ಸುಡುವುದು ಒಳ್ಳೆಯದಲ್ಲ. ಹಾಗೆ ಮಾಡಿದ ಮೇಲೆ ಗಾಯಕಲೆ ವಿಕಾರವಾಗಿ ಉಳಿಯುತ್ತದೆ. ಕೊಯ್ದು ತೆಗೆದಾಗ ಮತ್ತೆ ಬೆಳೆದರೆ, ವೈದ್ಯರ ಗಮನಕ್ಕೆ ಮೊದಲು ತರಬೇಕು. ಏಕೆಂದರೆ ಅದು ಏಡಿಗಂತಿಯಾಗುವ ಮುನ್ಸೂಚನೆ ಆಗಿರಬಹುದು. ಎಳೆಯದರಲ್ಲೇ ಇದನ್ನು ಗುರುತಿಸಿದರೆ ಸುಲಭವಾಗಿ ಹೋಗಲಾಡಿಸಬಹುದು. ತಡ ಮಾಡಿದರೆ ಆಳಕ್ಕೆ ಒಳಾಂಗಗಳಲ್ಲಿಳಿದು ಮಾರಕವಾಗಬಹುದು. ಯೂರೋಪಿಗಿಂತ ಉಷ್ಣದೇಶಗಳಲ್ಲಿ ಹೀಗಾಗುವುದು ಹೆಚ್ಚು. ಬಹಳ ದಿವಸಗಳು ಸೋಮಲ (ಆರ್ಸಿನಿಕ್) ಮದ್ದುಗಳ ಸೇವನೆ, ಎಕ್ಸ್‍ಕಿರಣಗಳಿಗೆ ಒಡ್ಡುವುದರಿಂದ ಕಾರಳ್ಳುಗಳೆದ್ದು ಮುಂದೆ ಏಡಿಗಂತಿ ಆಗಬಹುದು. ಕೀಲೆಣ್ಣೆ (ಟಾರ್), ಒಲ್ಲಡೆಣ್ಣೆಗಳ (ಪ್ಯಾರಾಫಿನ್ಸ್) ಕಾರ್ಖಾನೆ ಕೆಲಸಗಾರರಲ್ಲೂ ಉಡುಗೆಯಿಂದ ಮುಚ್ಚಿರದ ಮೈಮೇಲೂ ಹೀಗೇ ಆಗುವುದುಂಟು.

 

(ಡಿ.ಎಸ್.ಎಸ್.)